ಗೌವರ್-
ವೇಲ್ಸಿನ ಪಶ್ಚಿಮ ಗ್ಲಮಾರ್ಗನಿನ ಒಂದು ಪರ್ಯಾಯದ್ವೀಪ; ಗ್ರಾಮೀಣ ಜಿಲ್ಲೆ. ಇದರ ಉತ್ತರದಲ್ಲಿ ಬರ್ರೀ ಖಾರಿಯೂ ದಕ್ಷಿಣದಲ್ಲಿ ಬ್ರಿಸ್ಟಲ್ ಕಾಲುವೆಯೂ ಇವೆ.  ಈ ಪರ್ಯಾಯದ್ವೀಪದ ಬಹುಭಾಗ ಶಿಲಾಮಯ. 150' - 450' ಎತ್ತರದ ಪ್ರಸ್ಥಭೂಮಿ ಇದನ್ನು ಬಹುತೇಕ ಆವರಿಸಿಕೊಂಡಿದೆ. 600' ಗಿಂತ ಎತ್ತರದ ಗಿರಿಶ್ರೇಣಿಗಳಿವೆ. ಗೌವರಿನ ಹಲವು ಸಣ್ಣ ನದಿಗಳು ರಭಸದಿಂದ ಹರಿಯುತ್ತವೆ. ಪ್ರಸ್ಥಭೂಮಿ ನೆಲವನ್ನು ಆಳವಾಗಿ ಕೊರೆದಿವೆ.  ದಕ್ಷಿಣ ಗೌವರಿನ ಕರಾವಳಿ ನಿಸರ್ಗಸೌಂದರ್ಯದಿಂದ ಕೂಡಿದ್ದು. ಇಲ್ಲಿ ಪ್ರವಾಸೋದ್ಯಮ ವಿಶೇಷವಾಗಿ ಬೆಳೆದಿದೆ. ರಜಾ ದಿನಗಳಲ್ಲಿ ದೂರದ ಜನ ಇಲ್ಲಿ ಬಂದು ವಾಸಿಸುತ್ತಾರೆ. ಅವರಿಗಾಗಿ ಅಲ್ಲಲ್ಲಿ ವಿಶ್ರಾಂತಿಧಾಮಗಳನ್ನು ಉಪವನಗಳನ್ನೂ ನಿರ್ಮಿಸಲಾಗಿದೆ. ಸಮುದ್ರತೀರದ ಕೆಲವು ಪ್ರಪಾತ ಪ್ರದೇಶಗಳನ್ನು ರಾಷ್ಟ್ರೀಯ ಟ್ರsಸ್ಟ್‍ಗಳೆಂದು ಸಾರಿ ಅವನ್ನು ರಕ್ಷಿಸಲು ವ್ಯವಸ್ಥೇ ಮಾಡಲಾಗಿದೆ. ಗೌವರ್ ಜನ ತಮ್ಮ ಮೂಲಭಾಷೆ, ಉಡುಪು ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ.

ಆದಿಮಾನವನ ವಾಸಸ್ಥಾನವಾಗಿ ಗೌವರ್ ಜಿಲ್ಲೆಗೆ ಒಂದು ಇತಿಹಾಸವಿದೆ.  1823 ರಲ್ಲಿ ಪೆವಿಲ್ಯಾಂಡಿನ ಗೋಟ್ ಗುಹೆಯಲ್ಲಿ ಪ್ರಾಚೀನ ಶಿಲಾಯುಗದ ಮಾನವನದೆಂದು ನಿರ್ಣಯಿಸಲಾದ ಒಂದು ಅಸ್ಥಿಪಂಜರ ಸಿಕ್ಕಿದೆ. ಇದು ಪೆವಿಲ್ಯಾಂಡಿನ ರೆಡ್ ಲೇಡಿ ಎಂದು ಪ್ರಸಿದ್ಧವಾಯಿತು. ಆದರೆ ಇದು ಪುರುಷನ ಅಸ್ಥಿಯೆಂದು ಈಗ ನಂಬಲಾಗಿದೆ. ಗೌವರಿನ ಪಶ್ಚಿಮ ದಿಣ್ಣೆ ನೆಲದಲ್ಲಿ ಅನೇಕ ಗೋರಿಕಲ್ಲುಗಳೂ ಬೇರೆಬೇರೆ ಯುಗಗಳ ಗೋರಿದಿಬ್ಬಗಳೂ ಸಿಕ್ಕಿವೆ. ಕಬ್ಬಿಣ ಯುಗದಲ್ಲೂ ಅನಂತರದ ಯುಗಗಳಲ್ಲೂ ಇಲ್ಲಿಯ ಮಲೆತಲೆಗಳ ಮೇಲೆ ಮಾನವವಸತಿ ಇತ್ತು. ರೋಮನರ ಕಾಲದಲ್ಲಿ ಗೌವರಿನ ಲೌಗರ್‍ನಲ್ಲಿ ಜನವಸತಿಯಿತ್ತು. ಆಯ್ಸ್ಟರ್‍ಮೌತ್‍ನಲ್ಲಿ ಒಂದು ಕುಟೀರ ಸಿಕ್ಕಿದೆ. ರೋಮನರ ನಿರ್ಗಮನಕ್ಕೂ ನಾರ್ಮನರ ಆಗಮನಕ್ಕೂ ನಡುವಣ ಕಾಲದಲ್ಲಿ ಕೆಲ್ಟಿಕ್ ಕ್ರೈಸ್ತಮತ ಇಲ್ಲಿ ಪ್ರಸಾರವಾಯಿತು. ಆಗ ಇಲ್ಲಿ ಹಲವು ಚರ್ಚುಗಳು ನಿರ್ಮಾಣವಾಯಿತು. ಇದಲ್ಲದೆ ಗೌವರಿನ ಕರಾವಳಿಯಲ್ಲಿ ಸ್ಕಾಂಡೀನೇವಿಯನ್ ಆಕ್ರಮಣದ ಹಲವು ಕುರುಹುಗಳು ಕಂಡುಬುರುತ್ತವೆ. ಸ್ಕಾಂಡೀನೇವಿಯನ್ ಹೆಸರುಗಳನ್ನು ಹೋಲುವ ಹಲವು ಸ್ಥಳನಾಮಗಳು ಇಲ್ಲಿವೆ. 1100ರ ಅನಂತರ ವಾರ್‍ವಿಕ್‍ನ ಅರ್ಲ್ ಹೆನ್ರಿ ಡಿ ನ್ಯೂಬರ್ಗ್ ಗೌವರನ್ನು ಗೆದ್ದುಕೊಂಡ. 1536 ರಲ್ಲಿ ಗೌವರನ್ನು ಗ್ಲಮಾರ್ಗನ್ ಕೌಂಟಿಯಲ್ಲಿ ಸೇರಿಸಲಾಯಿತು.

16 ಮತ್ತು 17 ನೆಯ ಶತಮಾನಗಳಲ್ಲಿ ಉತ್ತರ ಗೌವರಿನಲ್ಲಿ ಅಲ್ಪಸ್ವಲ್ಪ ಕಲ್ಲಿದ್ದಲು ಗಣಿ ಕೆಲಸ ನಡೆಯುತ್ತಿತ್ತು. ಮೂಲತಃ ಇದು ಒಂದು ಕೃಷಿ ಪ್ರಧಾನ ಜಿಲ್ಲೆ. ಮಿಶ್ರ ವ್ಯವಸಾಯ, ಹೈನದ ಉತ್ಪತ್ತಿ, ಮುಖ್ಯ. ಬಿಷಪ್‍ಸ್ಟನ್ ಮತ್ತು ರೊಸಿಲಿಗಳಲ್ಲಿ ಮಾರಾಟಕ್ಕಾಗಿ ತರಕಾರಿ ಬೆಳೆಯುತ್ತಾರೆ.
				(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ